Thursday, November 1, 2012

ನಾನು.. ಅವಳಾಗಬೇಕು : ಬಂಧ ಮುಕ್ತಿ

"ಬಿಡು ಇಲ್ಲಿಂದ ನನ್ನ  ಹೊರ ಬಿಡೂ ...ನಿನಗೊಂದಿಷ್ಟೂ  ಕರುಣೆ ಬಾರದೆ? ಆ ಬದಿಯ ವಿಸ್ಮಯಗಳ ನೋಡಬೇಕೆನಿಸಿದೆ ...ದಮ್ಮಯ್ಯ" ಎಂದು ಎಷ್ಟು ಗೋಗರೆದರು ಅವನ ಮನಸು ಕರಗಲ್ಲಿಲ್ಲ.ಅವನಾದರೂ ಏನು ಮಾಡುವನು? ನನ್ನಷ್ಟೇ  ಅಸಹಾಯಕನಲ್ಲವೇ? ಎಂದು ಸಮಾದಾನ ತಂದು ಕೊಂಡೆ.ಆದರೆ ಆತ ಸಂಭವಿಸದವನೆ? ಅಶಕ್ತನೆ?ಅಸ್ಪೂರ್ಥಿವಂತನೆ?ಅನಿಶ್ಚಯನೆ?ಸಂಪೂರ್ಣ ಅಮೂರ್ತ ರೂಪನೆ? ನನ್ನನ್ನಿಲ್ಲಿಂದ ಪಾರುಮಾಡದಷ್ಟು ಅಸಮರ್ಥನೆ? ಸಾವಿರ ಸಾವಿರ ಪ್ರಶ್ನೆಗಳು ಅಲೆಗಳಂತೆ  ನನ್ನೊಳಗಿನ ನಿರ್ಲಿಪ್ತ ಭಾವನ ಮಂಟಪದ ಮೇಲಪ್ಪಳಿಸಿ ಕೆಣಕುತ್ತಿದ್ದವು.
       
  ಆತ  ಮೆಲ್ಲನೆ ನನ್ನೆಡೆಗೆ ಹಾದು ಬಂದ ನಾ ಹಿಂದೆ ಹಿಂದೆ ಸರಿದೆ.ಅವನು ಕರಗುವಂತ ಮುಗುಳ್ನಗೆಯೊಂದಿಗೆ ನನ್ನ ಅಶಾಂತತೆಯ ನೇವರಿಸುತ್ತಾ 'ನಿನ್ನಿಲ್ಲಿ ಬಂಧಿಯೇ?ಇಲ್ಲಿರದಂತದ್ದು  ಅಲ್ಲೇನಿದೆ?ಮತ್ತೊಮ್ಮೆ ಚಡಪಡಿಕೆಯೇ?ಆ ನರಳಿಕೆಯತ್ತ  ಆಕರ್ಷಣೆಯೇ?ನಿನಗಿಲ್ಲೇನು ಕೊರತೆ ಆಗಿದೆ ಹೇಳು?'ಎಂದು ತನ್ನ ಸಮುದ್ರದಾಳದ ಶಾಂತ ನಯನಗಳಲ್ಲಿ  ನನ್ನ ಮುಳುಗಿಸಲು ಯತ್ನಿಸಿದನು.ಯಾಕೊ ಭಯವೆನಿಸಿತು..ಇದೆ ಮೊದಲ ಬಾರಿಗೆ ಆ ಕಂಗಳತ್ತ ನೋಡಲಾಗುತ್ತಿಲ್ಲ.ಮನಸೆಳೆಯುತಿದೆಯಾದರು ಆ ಅದೃಶ್ಯ ಕನಸುಗಳೆಲ್ಲಾ ಒಟ್ಟಾಗಿ ಮುಗಿ ಬಿದ್ದು ನನ್ನ ಚಂಚಲ ಚಿತ್ತ ಅವುಗಳೊಂದಿಗೆ ಮಿಲನಿಸದಂತೆ ತಡೆಯುತ್ತಿವೆ.

ಅವನೆದುರು ಒಂದು ಕ್ಷಣ ಇರಬೇಕೆನಿಸಲಿಲ್ಲ.ನೂರಾರು ಗೊಂದಲಗಳು ನನ್ನ ಭಾರವಾಗಿಸಿವೆ.ಇನ್ನಿಲ್ಲಿರಲಾಗದು.ಆದರೆ.. ಆದರೆ ಅವನಪ್ಪಣೆ  ಇಲ್ಲದೆ ಹೋಗೋದಾದ್ರೂ ಎಲ್ಲಿಗೆ? ಯಾವ ಪುರುಷಾರ್ತಕ್ಕಾಗಿ?ಅವನು ನುಡಿದ ಹಾಗೆ ನನ್ನಗಿಲ್ಲೇನಾದರು ಕೊರತೆಯೇ? ಒಮ್ಮೆ ಸುತ್ತಲೂ ನಿಂತಲ್ಲೇ ತಿರುಗಿದೆ. ತೋಚಿದ  ದಾರಿಯಲ್ಲೆಲ್ಲಾ ಅಲೆದಾಡಿದೆ ಇಲ್ಲ  ಗುಲಗಂಜಿಯಷ್ಟು ಕೊರತೆಯ ಭಾವ ಕಾಡಲಿಲ್ಲ ನಿಜಕ್ಕೂ ನನಗೇನು ಕಡಿಮೆ ಆಗಿದೆ?ಹಾಗಿದ್ದರೆ ಪದೇ  ಪದೇ  ನನ್ನ ಸೆಳೆಯುತ್ತಿರುವ ಕನಸುಗಳೆಲ್ಲಾ ಬ್ರಹ್ಮೆಯಾಟವೆ?? ಇಲ್ಲವೋ ಯಾರದ್ದಾದರು  ಪಿತೂರಿಯೇ?ಅದೇಕೆ ನನ್ನನೀಗೆ ಕಾಡುತಿಹುದು?ಯಾವುದಕ್ಕೆ ಈ ಪರಿತಪನೆ?

 ಚಿತ್ರಕೃಪೆ:ಮದನ್ ಕುಮಾರ್
     ದೂರದಲ್ಲೊಂದು ಹೂವಿನ ಹಾಸಿಗೆ ಮೇಲೆ ಪರಿಮಳದ ಮಲ್ಲಿಗೆಯ ಪಕಳೆಗಳು ಬಿಡಿ ಬಿಡಿಯಾಗಿ ಚಿದರಿ ಧನ್ಯವಾಗಿತ್ತು.ನನ್ನ ಕನಸು ಮತ್ತೆ ಮೊಳಕೆಯೊಡೆಯಿತು.ಈ ಸಲ ಹಟವಿಡಿದಾದರು ಆತನ ಒಪ್ಪಿಸಲೇ ಬೇಕೆಂದು ಸಂಕಲ್ಪಿಸಿದೆ.ಅಷ್ಟರಲ್ಲೇ ಅಲ್ಲೇನೋ ಪಿಸುಮಾತು,ಉನ್ಮಾದದ  ಉದ್ದಿಪನ ಇಳಿದಂತೆ  ಉಸಿರುಗಟ್ಟಿದ  ನಡುಕಿನ ಶಬ್ದ.ಆ ಬಾಗಿಲಿಗೆ ಕಿವಿಯಾದೆ 'ಬರೀ  ಗಂಡ? 'ಹೌದು ಗಂಡಾದರೆ ಮಾತ್ರ ಗೊತ್ತಾಯಿತ?'.ಎಲ್ಲೋ ಏನೋ ಒಡೆದಂತಾಯಿತು...ಅಯ್ಯೋ ಅವೇ ಅವೇ ನನ್ನ ಹುರಿದೆಬ್ಬಿಸಿದ ಆ ಕನಸುಗಳು  ಮತ್ತೆ ಚುರಾದವು.ಇನ್ನೊಮ್ಮೆ ನಾ ಈ ಪಾಪದ ಲೋಕದ ಸಂಚಿಗೆ ಬಲಿಯಾಗಲು ಸಿದ್ದವಿಲ್ಲ.ಅದಕ್ಕೆ ಇನ್ನು ಈ ಕೆಟ್ಟ ಆಸೆಗಳೇ  ಮರಳ ಕೂಡದು.ಅವನ್ನೆಲ್ಲ  ಆರಿಸಿ ಸೇರಿಸಿ ಬಂಧಿಸಿ ಕಾಣದ ಕಾಡಿನ ಹಂದರದಲ್ಲಿ ದಫಾನ್ ಮಾಡಿಬಿಟ್ಟೆ.

ಅದೆಷ್ಟು  ದಿನಗಳಲೆದೆನೋ ..ಯಾಕೊ ನಿರಾಳವೆನಿಸಲ್ಲಿಲ್ಲ. ಆಳಕ್ಕಿಳಿದು ತೇಜಸ್ಸಿಲ್ಲದ ವ್ಯರ್ಥ ಕನಸಿನ ಪಳೆಯುಳಿಕೆಗಳನ್ನ ಹೊರ ತೆಗೆದೇ.ನನ್ನ ಹಿಂದಿನ ಹತ್ಯೆಯ ಕಥೆಯನ್ನ ಅವುಗಳ ಸಮಕ್ಷಮ ಮೌನ ರಾಗದಲ್ಲಿ ಹಾಡಿದೆ. ನನ್ನ 'ಅವಳಾಗೋ'   ಮೋಹ ರೂಪಿ ಕನಸುಗಳೆಲ್ಲಾ ಕರಗಿದವು ...ಕನಸಿನೊಂದಿಗೆ ಅಶಾಂತತೆಯು ಕರಗಿತು...ನನ್ನ ಭಾರವು ಕರಗಿತು...ಅತೃಪ್ತಿಯೂ  ಕರಗಿತು..ಎಲ್ಲವೂ  ಕರಗಿ ಕರಗಿ..ಕರಗುತ್ತಿದ್ದಂತೆ  ದಿವ್ಯಾ ಕಿರಣಗಳು ನನ್ನನ್ನಾವರಿಸಿದವು. ಹೌದು ನನ್ನವನೇ ಮೇಲು.ಅವನೇ ನನಗಾಸರೆ ನನಗವನೂರೆ ಎಲ್ಲಾ ಎಂದು ಬಂಧ ಮುಕ್ತವಾಗಿ ಹಗುರಾಗಿ ಅವನೆಡೆಗೆ ತೇಲಿದೆ. 

7 comments:

  1. " ಒಮ್ಮೆ ಹತ್ಯೆಗೊಳಗಾದ ಆ ಹೆಣ್ಣು ಭ್ರೂಣ ಮತ್ತೊಂದು ಜನ್ಮಕ್ಕಾಗಿ ಚಡಪಡಿಸುವ ಬಗೆಯನ್ನ ನೀನು ವರ್ಣಿಸಿದ ರೀತಿ ತುಂಬಾನೇ ಕಾಡುವಂತಿದೆ".

    ವೈಶೂ ಇದು ನಂಗೆ ತುಂಬಾ ದಿಗ್ಭ್ರಾಂತನನ್ನಾಗಿಸಿದ ಬರಹ. ಮೊದಲಿಗೆ ಅರ್ಥವಾಗದಿದ್ದರೂ ಆನಂತರ ಯೋಚನೆಗೆ ಓರೆ ಹಚ್ಚಿದ ಬರಹ. ಹೆಣ್ಣು ಭ್ರೂಣ ಹತ್ಯೆ ಎಂಬ ಮಹಾ ಪಿಡುಗನ್ನೇ ಗುರಿಯಾಗಿಸಿ ಬರೆದ ನಿನ್ನ ಈ ಸಾಮಾಜಿಕ ಕಳಕಳಿಯುಳ್ಳ ಬರಹ ನಿಜಕ್ಕೂ ಮೆಚ್ಚುವಂಥದ್ದು.

    ReplyDelete
  2. ರಾಘ ಹೌದು ದೈವದೊಡನೆ ಸಮಾಗಮಿಸದೆ ಹೆಣ್ಣಾಗುವ ಆಶಯ ಹೊತ್ತು ಹೊರಟ ಆತ್ಮದ ಕಥೆ ವ್ಯಥೆ.ಇದನ್ನು ಬರೆಯುವಾಗ ನನಗೆ ಪರಮಾತ್ಮನಲ್ಲಿ ಸ್ವಲ್ಪ ಹೆಚ್ಚೇ ಪ್ರೀತಿ ಉಕ್ಕಿತ್ತು ಅನ್ನಬಹುದು.ನನ್ನ ಬರಹಗಳ ನೀನು ವಿಮರ್ಶಿಸುವ ಪರಿ ಓದಲು ಖುಷಿಯಾಗುತ್ತೆ.ಮೆಚ್ಚಿದಕ್ಕೆ ಧನ್ಯವಾದಗಳು.:-)

    ReplyDelete
  3. ಜೀವ ಜೀವದ ಸ್ವರ ಸಂಚಾರ..ಮಾನಸ ಲೋಕದ ಗಂಗೆಯ ಧಾರೆ...ತುಂಬಾ ಯೋಚನಾ ಲಹರಿಗೆ ಈಡು ಮಾಡುತ್ತದೇ ನಿಮ್ಮ ಬರಹ...ಅಭಿನಂದನೆಗಳು

    ReplyDelete
  4. ಹೆಣ್ಣು ಭ್ರೂಣ ಹತ್ಯೆಯನ್ನು ಆಧಾರವಾಗಿ ಟ್ಟು ಕೊಂಡು ಬರೆದ ಈ ಬರಹ ಅದ್ಭುತ ವಾಗಿದೆ....ಕೊನೆಯ ನಾಲ್ಕು ಸಾಲುಗಳನ್ನು ಓದುವ ವರೆಗೆ ನನಗೆ ಬರಹವನ್ನು ಅರ್ಥೈಸಿ ಕೊಳ್ಳಲು ಕಷ್ಟ ವಾಗಿದ್ದು ನಿಜ...ನಿನ್ನ ಈ ವಿಶಿಷ್ಟ ಶೈಲಿಯೇ ನನಗೆ ನಿನ್ನ ಬರಹಗಳನ್ನು ಓದುವಂತೆ ಪ್ರೇರೆಪಿಸುವುದು. ಸುಂದರ ಬರಹ....ಇನ್ನು ಅನೇಕ ಬರಹಗಳು ನಿನ್ನ ಈ ಸುಂದರ ಬ್ಲಾಗ್ ಮೂಲಕ ಮೂಡಿಬರಲಿ...ಅಭಿನಂದನೆಗಳು ಸಹೋದರಿ....

    ReplyDelete
  5. Ninu select mado barahada vastu adakke koduva vishista dwani ninna shaili ellavu nanna mukhavismithalaagi madutte.congrats.write more and more.:-)

    ReplyDelete
  6. "ನಾನು.. ಅವಳಾಗಬೇಕು : ಬಂಧ ಮುಕ್ತಿ" ee title ye thumba thumba ne ista aythu... overall helbeku andre Superb Superb Superb...!! innu echu intha barahagallana nin inda nirkshe madthivi Sheshuma...!! :)

    ReplyDelete
  7. ಸಂಚಾರದ ತಾದಾತ್ಮಯತೆಯ ಸಾಕಾರ ಇಲ್ಲಿದೆ. ಬ್ರಹ್ಮ ಹತ್ಯಾ ದೋಷವೆಂದು ಹೆದರಿಸಿದರೂ ತದ್ದಿಕೊಳ್ಳದ ಅಲ್ಪ ಮತಿಗಳ ಬುದ್ಧಿ ಹೀನ ಕ್ರಿಯೆ ಅಮಾನವೀಯ.

    ಕೋಟಿ ಭಾವಗಳ ತುಂಬಿ ಬರಹವಾಗಿಸುವ ಶಕ್ತಿ ನಿಮಗಿದೆ. ನಮ್ಮನ್ನೂ ನಿಮ್ಮ ಓದಿನಲ್ಲಿ ತೇಲಿಸಿಬಿಡಿ.

    ReplyDelete